ರಜತೋತ್ಸವದ ರೋಮಾಂಚಕಾರಿಯಾದ ಗುಂಗಿನಿಂದ ಸುಗುಣಮಾಲ ಇನ್ನೂ ಪೂರ್ತಿಯಾಗಿ ಹೊರಬಂದಿಲ್ಲ. ಏನು ಸಂಭ್ರಮ ಏನೊಂದು ಸಡಗರ ಏನೊಂದು ವಿಜೃಂಭಣೆ ಅನುಭವವು ಸವಿಯಲ್ಲ; ಅದರ ನೆನಪೇ ಸವಿಯು??? ನಡೆದುಬಂದ ದಾರಿಯ ಕಡೆಗೊಮ್ಮೆ ಹೊರಳಿ ನೋಡುವಾಗಲಂತೂ ಸುಗುಣಮಾಲಾ ಪತ್ರಿಕೆಯ ಹಿಗ್ಗಿಗೆ ಪಾರವೇ ಇಲ್ಲ. ಆ ಇಪ್ಪತ್ತೈದು ವರ್ಷಗಳಲ್ಲಿ ಎಷ್ಟೆಷ್ಟು ಪತ್ರಿಕೆಗಳು ಬೆಳಕು ಕಂಡವು. ಇನ್ನು ಎಷ್ಟೆಷ್ಟು ಪತ್ರಿಕೆಗಳು ನೆಲಕಚ್ಚಿ ವಿಸ್ಮೃತಿಯ ಗರ್ಭದಲ್ಲಿ ಅಡಗಿಹೋದುವು ಹೀಗಿದ್ದರೂ ಸುಗುಣಮಾಲಾದ ಕೂದಲೂಕೊಂಕಿಲ್ಲ. ಮಾಲೆಯ ಹೂಗಳಲ್ಲಿ ಒಂದೂ ಬಾಡಿಬಿದ್ದಿಲ್ಲ. ದಾಪುಗಾಲುತ್ತಲೇ ಸಾಗಿದೆ ಅದರ ಜೈತ್ರಯಾತ್ರೆ. ಇದರ ತಲೆಯ ಮೇಲಿದೆ ಶ್ರೀಕೃಷ್ಣನ ಅಭಯಹಸ್ತ. ಬೆಂಬಲಕ್ಕೆ ಶ್ರೀಸುಗುಣೇಂದ್ರ ತೀರ್ಥರ ಶ್ರೀರಕ್ಷೆ, ಸಾಲದಕ್ಕೆ ಓದುಗರ ಬಲ ಬೆಂಬಲ. ಇನ್ನೇನು ಬೇಕು. ಸುಗುಣಮಾಲಾ ಪತ್ರಿಕೆಯ ಈ ದಿಗ್ವಿಜಯದಲ್ಲಿ ಒಂದು ಪವಾಡವೇ ಸರಿ ಎನ್ನಲು ಸಾಕಷ್ಟು ಕಾರಣಗಳಿಲ್ಲದಿಲ್ಲ. ಈ ಪತ್ರಿಕೆಯು ಎಂದೂ ಅಗ್ಗದ ಜನಪ್ರಿಯತೆಯನ್ನು ತನ್ನ ಬಂಡವಾಳವಾಗಿಸಿಕೊಂಡಿಲ್ಲ. ಕೀಳು ಮಟ್ಟದ ಅಭಿರುಚಿಗೆ ಮಣೆ ಹಾಕಿದ್ದಿಲ್ಲ. ಅಶ್ಲೀಲವೆನಿಸಬಹುದಾದ ಅರೆಬೆತ್ತಲೆ ಚಿತ್ರಗಳಿಗಿಲ್ಲಿ ಜಾಗವಿಲ್ಲ; ವೀತ ಪತ್ರಿಕೆಗಳಲ್ಲಿ ಜಾಗ ಹಿಡಿಯುವ `ಗಾಸಿಪ್'ಗಳಿಗಿಲ್ಲಿ ಅವಕಾಶವಿಲ್ಲ, ಸಿನಿಮಾವಾರ್ತೆ, ಕ್ರೀಡಾವಾರ್ತೆಗಳಿಗೂ ಇದರಲ್ಲಿ ಎಡೆ ಇಲ್ಲ.
ಒಟ್ಟಿನಲ್ಲಿ ಸುಗುಣಮಾಲಾ ಸಮಾಜಮುಖಿಯಾದ ಜೀವನಗಂಧಿಯಾದ ಪತ್ರಿಕೆಯೆಂದು ಖ್ಯಾತಿ ಪತ್ರಕರ್ತ ಶ್ರೀ. ಎಂ.ವಿ. ಶಾಮಚಾರೀ ಮುಂತಾದವರು ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿದೆ. ಈ ಪತ್ರಿಕೆಯ ಭವಿಷ್ಯ ಓದುಗರ ಚಂದಾದಾರರ ಮತ್ತು ಜಾಹೀರಾತುದಾರರ ಕೈಯಲ್ಲಿದೆ ಎಂಬುದು ನಿರ್ವಿವಾದವನ್ನು ಸನಾತನ ಧರ್ಮ ಮತ್ತು ಸಂಸ್ಕೃತಿಯ ನೀಡಿಲಿನಿಂದ ದೂರ ಸರಿಯುತ್ತಿರುವ ಪೀಳಿಗೆಯನ್ನು ಮಾತೃಸಂಸ್ಕೃತಿಗೆ ಮರಳಿಸುವ ಒಂದು ಪ್ರಯತ್ನ ನಮ್ಮದು. ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸುವಂತೆ ಓದುಗರ ಮನವೊಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಉದಾತ್ತ ಉದ್ದೇಶ ಸಾಧನೆಯಲ್ಲಿ ನೀವೂ ಕೈಜೋಡಿಸುವಿರಲ್ಲವೇ? ನಿಮ್ಮ ಬೆಂಬಲವೇ ನಮ್ಮ ಬಲ. ನಿಮ್ಮ ಶುಭಾಕಂಕ್ಷೆಯೇ ನಮಗೆ ಶ್ರೀರಕ್ಷೆ.
ಮಾನವೀಯತೆ ಮಣ್ಣುಗೂಡಿರುವ, ಸ್ವಾರ್ಥಲಾಲತ್ಸೆ ತಾನೇತಾನಾಗಿ ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ, ಸಂಯಮವು ದುರಾಸೆಗೆ, ನಮ್ರತೆಯ ಅಹಮಹಿಮಿಕೆಗೆ, ಧರ್ಮಪರಾಯಣತೆಯು ಧರ್ಮಾಂಧತೆಗೆ ಬಲಿಯಾಗಿರುವ ಈ ಸನ್ನಿವೇಶದಲ್ಲಿ, ವ್ಯಕ್ತಿ-ವ್ಯಕ್ತಿಯ ನಡುವೆ `ನಾನು, ನನ್ನದು, ನನ್ನಿಂದ' ಎಂಬ ಅಡ್ಡಗೋಡೆಗಳು ತಲೆ ಎತ್ತುತ್ತಿವೆ. ಭೂಖಂಡಗಳೂ ಹತ್ತಿರ ಹತ್ತಿರವಾಗುತ್ತಿರುವಾಗ ವ್ಯಕ್ತಿವ್ಯಕ್ತಿಯಿಂದ - ಮಗ ತಂದೆತಾಯಂದಿರಿಂದ, ಪತಿ ಪತ್ನಿಯಿಂದ- ದೂರವಾಗುತ್ತಿರುವ ಸಮಕಾಲೀನ ಸ್ಥಿತಿವಿಶೇಷದಲ್ಲಿ ಒಬ್ಬೊಬ್ಬನೂ ಒಂಟಿ ದ್ವೀಪವಾಗುತ್ತಿದ್ದಾನೆ, ತನ್ನ ಮನೆಯಲ್ಲೆ ತಾನು ಪರಕೀಯನಾಗಿ ಬಿಡುತ್ತಾನೆ. ತಣಿಯದ ಧನದಾಹ ನಮ್ಮನ್ನು ರಕ್ಷಸರನ್ನಾಗಿಸುತ್ತಿದೆ. ಇದರ ಸಹಜ ಫಲವಾಗಿ ನಾಮ ಮನಸ್ಥಿತಿಗೆ ಎರವಾಗಿ ಅನಾಥ ಪ್ರಜ್ಞೆಯಿಂದ ನರಳಬೇಕಾಗಿದೆ. ಈ ಸ್ಥಿತಿಗಳಲ್ಲಿ ವ್ಯಕ್ತಿಗಳಲ್ಲಿ ಸುಗುಣಗಳನ್ನು ಬಿತ್ತಿ ಬೆಳೆಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯಕೂಡ. ಸುಗುಣಮಾಲಾ ಪತ್ರಿಕೆಯ ಅಂತಹ ಒಂದು ಉದ್ದೇಶಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ.
ಶ್ರೇಷ್ಠವಾದ ಓದುವ ಸಾಮಗ್ರಿಯನ್ನು ಒದಗಿಸಿ ಸದಭಿರುಚಿಯ ಸದ್ಗುಣಗಳೂ ಸುಸಂಸ್ಕೃತರೂ ಆದ ಓದುಗರನ್ನು ರೂಪಿಸುವುದೇ ಸುಗುಣಮಾಲಾ ಪತ್ರಿಕೆಯ ಹೆಗ್ಗುರಿ. ನಶಿಸಿ ನಾಮಾವಶೇಶವಾಗುತ್ತಿರುವ ಮೌಲ್ಯಗಳನ್ನು ಪುನರುಜ್ಜೀವನ ಗೊಳಿಸುವುದೇ ಈ ಪತ್ರಿಕೆಯ ಹೀರಾಸೆ, ಹಾಗೆಂದು ಈ ಪತ್ರಿಕೆಯು ಸಮಾಜದ ವಿವಿಧಸ್ತರಗಳ ಓದುಗರಿಗೆ ರುಚಿಸಬಲ್ಲ ವೈವಿಧ್ಯಪೂರ್ಣ ಲೇಖನಗಳನ್ನು ಒದಗಿಸಲು ತಪ್ಪಿಲ್ಲ. ಶ್ರೀ ಶ್ರೀ ಸುಗುಣೇಂದ್ರ ತೀರ್ಥಸ್ವಾಮಿಜಿಯವರ ಸುವಾಣಿ, ಸುಧಾವಚನಗಳು, ವಿದ್ಯಾವಾಸಸ್ಪತಿ ಸಗ್ರಿಯವರ ಲೇಖನಗಳು ಪ್ರೌಢವಾಗಿದ್ದು ಪಂಡಿತಮಾನ್ಯವಾಗಿವೆ. ಸುಶ್ರೀ ಯವರ ಲೇಖನಿಯಿಂದ ಹೊರಬಂದ ಮರ್ಮಮೀಮಾಂಸೆಯು ಟೊಳ್ಳುಮಾನವರ, ಹುಲ್ಲುಮನುಷ್ಯರ ಕೇಪಟ್ರ ಬೂಟಾಟಿಕೆ, ಗೋಮುಖವ್ಯಾಘ್ರತನದ ಮುಖವಾಡಗಳನ್ನು ನುಚ್ಚುನೂರಾಗಿಸುವ ಚುಚ್ಚುಮದ್ದಿನಂತಿರುತ್ತದೆ. ಕ್ರೂರನಿರ್ಲಕ್ಷ್ಯಕ್ಕೆ ಗುರಿಯಾಗಿರುವ ನಮ್ಮ ಪುರಾಣೇತಿಹಾಸಗಳಲ್ಲಿ ಆಸಕ್ತಿಯನ್ನು ಕಂಡಿರಿಸಬಲ್ಲ ಸಾಂಸ್ಕೃತಿಕ ರಸಪ್ರಶ್ನೆಗಳಿಗೆ ಒಂದು ಅಂಕಣವೇ ಮೀಸಲಿದೆ. ಮನೆಮದ್ದು, ಯೋಗ ಮೊದಲಾದುವುಗಳನ್ನು ಕುರಿತಾದ ತಜ್ಞರ ಲೇಖನಗಳಿಗೆ ಇಲ್ಲಿ ಅವಕಾಶವಿದೆ.